ತ್ಯೂಸಿಡಿಡೀಸ್
 	ಕ್ರಿ.ಪೂ.ಸು. 471-400. ಪ್ರಸಿದ್ಧ ಗ್ರೀಕ್ ಇತಿಹಾಸಕಾರ. ಹಿಸ್ಟರಿ ಆಫ್ ದಿ ಪೆಲಪನೀಷಿಯನ್ ವಾರ್ ಎಂಬ ಅಪೂರ್ಣ ಕೃತಿಯ ಕರ್ತೃ. ಈತನ ಜೀವಿತದ ಬಗ್ಗೆ ಹೆಚ್ಚಿನ ಅಂಶಗಳು ತಿಳಿದಿಲ್ಲ. ಹುಟ್ಟಿದ್ದು ಅಥೆನ್ಸಿನಲ್ಲಿ. ತಂದೆ ಅಥೆನ್ಸಿನ ನಾಗರಿಕ ಓಲೊರಸ್. ಆತನಿಗೆ ತೆಲಾಸ್‍ನ ಬಳಿ ಬ್ರೇಸಿಯನ್ ತೀರದಲ್ಲಿ ಸ್ಯಾಪ್ಟೆ ಹಿಲೇ ಎಂಬಲ್ಲಿನ ಚಿನ್ನದ ಗಣಿಗಳಿಂದ ಒಳ್ಳೆಯ ಆದಾಯ ಬರುತ್ತಿತ್ತು. ಹೀಗಾಗಿ ತ್ಯೂಸಿಡಿಡೀಸನಿಗೆ ಚಿಕ್ಕಂದಿನಿಂದಲೇ ಉನ್ನತ ರಾಜಕೀಯ ವಲಯಗಳಲ್ಲಿ ಓಡಾಡಿ ಅಲ್ಲಿನ ವಿಷಯಗಳನ್ನು ಸಂಗ್ರಹಿಸುವ ಸುಸಂಧಿ ದೊರಕಿತ್ತು. ಇವರ ವ್ಯವಹಾರಗಳೆಲ್ಲ ತ್ರೇಸ್ ರಾಷ್ಟ್ರದಲ್ಲಿದ್ದವು. ಇದರಿಂದ ಎರಡೂ ನಗರಗಳ ಇತಿಹಾಸ, ಬೆಳೆವಣಿಗೆಗಳನ್ನೆಲ್ಲ ಈತ ಚೆನ್ನಾಗಿ ತಿಳಿದಿದ್ದ. ಈತ ತತ್ತ್ವಶಾಸ್ತ್ರವನ್ನು ಅನ್ಯಾಕ್ಸಗೊರಾಸನ (ನೋಡಿ- ಅನ್ಯಾಕ್ಸಗೊರಾಸ್) ಕೈಕೆಳಗೂ ಅಲಂಕಾರಶಾಸ್ತ್ರವನ್ನು ಆಂಟಿಫಾನ್‍ನ (ನೋಡಿ- ಆಂಟಿಫಾನ್) ಕೈಕೆಳಗೂ ಅಭ್ಯಾಸ ಮಾಡಿದ. ಆಲೋಚನೆ ನಿಸ್ಸಂದಿಗ್ಧವಾಗಿ ಸ್ಪಷ್ಟವಾಗಿರಬೇಕು; ಭ್ರಮೆಯಿಂದ ದೂರವಾಗಿ ವಿವೇಚನೆಯಿಂದ ವರ್ತಿಸಬೇಕು; ಬರೀ ಭಾವಾವೇಶದ ದೇಶಭಕ್ತಿ ಕೂಡದು; ತನ್ನ ನಿಜವಾದ ಹಿರಿಯ ಗುಣಗಳಿಂದ ದೇಶಭಕ್ತಿಗೆ ಕುಂದು ಬಾರದಂತೆ ವರ್ತಿಸಬೇಕು-ಇವೇ ಈತನ ಆದರ್ಶಗಳಾದವು.

	ಕ್ರಿ.ಪೂ. 5ನೆಯ ಶತಮಾನದಲ್ಲಿ ಅಥೆನ್ಸಿನ ರಾಜಕೀಯ ಪ್ರಾಬಲ್ಯ ಬಹಳವಾಗಿ ಬೆಳೆದಿದ್ದು ಜನಜೀವನದಲ್ಲೂ ತತ್ಪರಿಣಾಮವಾದ ಬದಲಾವಣೆಗಳಾಗ ತೊಡಗಿತ್ತು. ಇಷ್ಟಾದರೂ ಈತನ ಗ್ರಂಥದಲ್ಲಿ ಆ ಯುಗದ ಸಾಹಿತ್ಯ, ಕಲೆ ಜನಜೀವನ ಮುಂತಾದವುಗಳ ವಿವರಣೆ ದೊರಕದು. ಆಗಿನ ವಿಜ್ಞಾನಿಗಳ, ಗಣಿತಜ್ಞರ, ಶಿಲ್ಪಿಗಳ, ಸಾಹಿತಿಗಳ, ವೈದ್ಯರ, ಜ್ಞಾನಿಗಳ ವೇದಾಂತಿಗಳ ಪ್ರಸಂಗವೂ ಈ ಗ್ರಂಥದಲ್ಲಿಲ್ಲ. ಈತನ ಧ್ಯೇಯ ಯಾವುದಾದರೂ ಒಂದು ಕಾಲದ ಇತಿಹಾಸ ಬರೆಯುವುದಾಗಿರದೆ ಒಂದು ಘಟನೆಯ ಬಗ್ಗೆ ಬರೆಯುವುದಾಗಿತ್ತು. ಪೆಲಪನೀಷಿಯನ್ ಸಮರ ಗ್ರೀಕ್ ಇತಿಹಾಸದಲ್ಲಿ ಒಂದು ಮಹತ್ತ್ವದ ಸ್ಥಾನವುಳ್ಳದ್ದು. ಹಿಂದೆಂದೂ ಕೇಳರಿಯದಷ್ಟು ವಿಪತ್ಕಾರಕ ಸಮರವಿದು ಎಂಬ ಭಾವನೆ ತ್ಯೂಸಿಡಿಡೀಸ್‍ನಲ್ಲಿ ತುಂಬಿ ಬಂದಿತ್ತು. ತ್ರೇಸ್ ಮತ್ತು ಅಥೆನ್ಸ್ ನಗರಗಳು ಇದಕ್ಕಾಗಿ ಎಲ್ಲ ವಿಧವಾದ ಸಿದ್ಧತೆಗಳನ್ನು ಮೊದಲಿನಿಂದಲೂ ಮಾಡಿಕೊಂಡಿದ್ದವೆಂಬ ವಿಷಯ ಈತನಿಗೆ ತಿಳಿದಿತ್ತು. ಹಾಗೆಂತಲೇ ಯುದ್ಧ ಆರಂಭವಾದ ಮೊದಲ ದಿನದಿಂದಲೇ ಅವರ ಬಗ್ಗೆ ಬರೆಯಾಲರಂಭಿಸಿದ ಈ ಇತಿಹಾಸಕಾರ ಕ್ರಿ.ಪೂ. 424ರಲ್ಲೊಮ್ಮೆ ತಾನು ಅದರಲ್ಲಿ ಭಾಗವಹಿಸಬೇಕಾಗಿ ಬಂತು. ಆ ವರ್ಷದ ಚಳಿಗಾಲದಲ್ಲಿ ಏಳು ಯುದ್ಧನಾವೆಗಳ ತ್ರೇಸನ್ನು ಎದುರಿಸಿ ಈತ ಹೋರಾಡಿದ. ಈತನಿಂದ ನಿರೀಕ್ಷಿಸಿದ ಗೆಲುವು ದೊರಕಿಲ್ಲವಾಗಿ ಸಂಶಯಗ್ರಸ್ಥರಾದ ಅಥೇನಿಯನರು ಈತನನ್ನು ನಗರದಿಂದ ಹೊರದೂಡಿದರು. ಕ್ರಿ.ಪೂ. 423ರಿಂದ 404ರ ವರೆಗೆ ಈತ ತ್ರೇಸಿನಲ್ಲಿನ ತನ್ನ ಭೂಮಿಗಳನ್ನು ನೋಡಿಕೊಂಡಿದ್ದ. ಈ ವೇಳೆಯಲ್ಲಿ ಸಮರದ ಪ್ರತ್ಯಕ್ಷದರ್ಶಿಯಾಗಿ ಬಹಳವಾಗಿ ಪರ್ಯಟನ ಮಾಡಿದ; ಒಮ್ಮೆ ಅಥೆನ್ಸ್ ನಗರಕ್ಕೂ ಹೋಗಿ ಬಂದ.	(ಜಿ.ಬಿ.ಆರ್.)

	ಪ್ರಾಯಶಃ ಕ್ರಿ.ಪೂ. 400ರಂದು ಯಾರೋ ಈತನನ್ನು ಯಾವುದೋ ಕಾರಣಕ್ಕಾಗಿ ಕೊಲೆಮಾಡಿದರು ಎನ್ನಲಾಗಿದೆ.

ಮಮತೆ ಮೋಹ ಶ್ಲಾಘನೆ ವಿರೋಧ ದ್ವೇಷ ಖಂಡನೆ ಯಾವುದಕ್ಕೂ ಎಡೆಗೊಡದೆ, ಮಾನವಿಕ ಸಂವೇದವನ್ನೇ ಕಂಡರಿಯದವನಂತೆ, ಘಟನೆಗಳನ್ನೂ ವ್ಯಕ್ತಿಗಳನ್ನೂ ನಿರೂಪಿಸುವ ಅಪೂರ್ವ ಕೌಶಲ ತ್ಯೂಸಿಡಿಡೀಸನದು. ತನ್ನ ಗ್ರಂಥದ ಎರಡನೆಯ ಮುನ್ನುಡಿಯಲ್ಲಿ ಇವೆಲ್ಲವನ್ನೂ ಅಥೆನ್ಸಿನ ತ್ಯೂಸಿಡಿಡೀಸ್‍ನಾದ ನಾನೇ ಬರೆದಿದ್ದೇನೆ. ಸಕ್ರಮವಾಗಿ ಪ್ರತಿಯೊಂದನ್ನೂ ಅದು ನಡೆದಂತೆ ಹಿಮಗಾಲ ಬೇಸಗೆಯನ್ನು ಹಿಡಿದು, ಸ್ಟಾರ್ಟನರೂ ಅವರ ಸಂಗಡಿಗರೂ ಕೋಟೆಗೋಡೆಗಳನ್ನು ಗೆದ್ದು ಅಥೆನ್ಸಿನವರ ಸಾಮ್ರಾಜ್ಯವನ್ನು ಒಡೆದುರುಳಿಸದ ವರೆಗೆ ಬರೆಯಲಾಗಿದೆ ಎಂದಿದ್ದಾನೆ.
ಇತಿಹಾಸ ಲೇಖನವನ್ನು ಅಚ್ಚುಕಟ್ಟೂ ರಸವತ್ತೂ ಆದ ಕಾವ್ಯವಾಗಿಸಿದ ಹಿರಿಮೆ ಈತನದು. ನೂರಾರು ಸಂಗತಿಗಳಿಂದ ಮನಸ್ಸಿಗೆ ಗೊಂದಲವನ್ನು ತಂದುಕೊಡುವ 27, 28 ಸಂವತ್ಸರಗಳ ಚರಿತ್ರೆಯಲ್ಲಿ ಕ್ಲುಪ್ತ ಸಂವಿಧಾನವನ್ನು ಕಂಡುಹಿಡಿದು, ಮನವೊಪ್ಪಿಸುವ ಆಧಾರರಾಶಿಯಿಂದ ಅದನ್ನು ಸಮರ್ಥಿಸಿ, ಮಜಲು ಮಜಲಿಗೂ ಕುತೂಹಲವನ್ನು ಹೆಚ್ಚಿಸುವ ಕತೆಗಾರಿಕೆಯನ್ನು ಇಲ್ಲಿ ಈಗ ತೋರಿದ್ದಾನೆ. ಆದದ್ದೆಲ್ಲವೂ ಒಂದೇ ದೊಡ್ಡ ದಾರುಣ ಕಥೆಯೆಂಬುದು ಗೋಚರವಾದದ್ದು ಬಹುಶಃ ಈತನಿಗೊಬ್ಬನಿಗೇ ಎಂದು ತೋರುತ್ತದೆ. ಕೊನೆಯ ಪರಿಚ್ಛೇದ ಅಪೂರ್ಣವಾಗಿ ಉಳಿದಿದ್ದರೂ ವಿಷಯದ ಪರಿಜ್ಞಾನ ಸರಿಸುಮಾರಾಗಿ ಪೂರ್ತಿಯಾಗಿಯೇ ದೊರಕುತ್ತದೆ. ತಾನೇ ಕಣ್ಣಿಂದ ಕಂಡ ವಿವರಗಳು, ಇತರರಿಂದ ಕೇಳಿ ತಿಳಿದುಕೊಂಡು ಹೋಲಿಸಿ, ಪಿಕ್ಕಿನೋಡಿ ಅನ್ಯೋನ್ಯಾಭಾಸಗಳನ್ನು ಕೊಡವಿಬಿಟ್ಟು ಸತ್ಯವೋ ಅಥವಾ ಸತ್ಯಕ್ಕೆ ಅತಿ ಹತ್ತಿರವೋ ಎಂದು ಭಾವಿಸಬಹುದಾದ ಸಂಗತಿಗಳು; ಕಾಗದ ಪತ್ರ ಕೌಲುಕರಾರು ಸಂಧಾನಲೇಖ ಮುಂತಾದ ದಾಖಲೆಗಳು; ಮಂತ್ರಾಲೋಚನೆಗಳ ವಾದ ವಿವಾದದ ವರದಿ, ಘಟನೆಗಳನ್ನು ಕುರಿತು ಅವರಿವರ ಟೀಕೆ ಟಿಪ್ಪಣಿಗಳು-ಹೀಗೆ ಇತಿಹಾಸ ಲೇಖನಕ್ಕೆ ಉಪಯುಕ್ತವಾಗಬಲ್ಲ ಸಕಲ ಸಾಮಗ್ರಿಯನ್ನೂ ಎಚ್ಚರಿಕೆಯಿಂದ ಈತ ಶೇಖರಿಸಿದ್ದಾನೆ. ತನ್ನ ಸ್ವಂತ ಅಭಿಪ್ರಾಯವನ್ನು ಎಲ್ಲಿಯೂ ಹೇರಿಲ್ಲ. ಅಲ್ಲದೆ ಸಾಹಿತ್ಯಕ್ಕೆ ಮೀಸಲಾದ ಧ್ವನಿ ಲಕ್ಷಣ ಈ ಕೃತಿಯಲ್ಲಿ ಚೆನ್ನಾಗಿ ಮೂಡಿಬಂದಿದೆ.

ಕಥನ ಮತ್ತು ನಿರೂಪಣೆಗಳ ಜೊತೆಗೆ ಈತ ಇನ್ನೊಂದು ಅಪೂರ್ವ ವಿಧಾನವನ್ನು ತನ್ನದೇ ಆದ ಪ್ರಾವೀಣ್ಯದಿಂದ ಬಳಸಿಕೊಂಡಿದ್ದಾನೆ. ಅದೇನೆಂದರೆ ಮುಖ್ಯ ವ್ಯಕ್ತಿಗಳು ಮಾಡಿದ ಭಾಷಣಗಳು. ಆ ಭಾಷಣಗಳೆಲ್ಲ ಅವರು ಮಾಡಿದಂತೆಯೇ ತದ್ವತ್ತಾಗಿ ಚರಿತ್ರಕಾರರ ಕೈವಶವಾದುವು ಎನ್ನುವುದು ಧಾಷ್ಟ್ರ್ಯ. ಎದುರಿದ್ದು ಕಿವಿಯಾರೆ ಆಲಿಸಿದವರಿಂದ ಒದಗಿದ ಮರು ಹೇಳಿಕೆಗಳೇ ಈತನಿಗೆ ಆಧಾರವಾಗಿರಬೇಕು. ಈತನಲ್ಲಿ ನಾಟಕೀಯ ವಿಭಾವನಾಶಕ್ತಿ ಪ್ರಶಸ್ತವಾಗಿ ಕುದುರಿದ್ದಿತೆಂದು ಕಾಣುತ್ತದೆ. ಯಾವ ಪುರುಷ ಯಾವ ಸಮಯದಲ್ಲಿ ಏನು ಮಾತಾಡಬಲ್ಲ ಏನು ಮಾತಾಡಿದ ಎಂಬುದು ಈತನಿಗೆ ಕನ್ನಡಿಯಲ್ಲಿ ಕಂಡಂತೆ ವೇದ್ಯವಾಗುತ್ತಿತ್ತು. ಮಾನವ ಹೃದಯದ ಪ್ರಜ್ಞೆಯಲ್ಲಿ ಈತ ನಿಷ್ಣಾತ. ಭಾಷಣಗಳ ಉದ್ಧರಣದಿಂದಾಗಿ ಈತನ ಕೃತಿ ವಿಶೇಷ ಕಾಂತಿಯುಕ್ತವಾಗಿದೆ. ಅವು ವ್ಯಕ್ತಿಗಳ ಜಾಯಮಾನ ಆಕಾಂಕ್ಷೆ ಗುಣಾವಗುಣವನ್ನು ಮಾತ್ರ ಪ್ರತಿಫಲಿಸಿ ತಮ್ಮ ಕಾರ್ಯವನ್ನು ಪೂರೈಸುವುದಿಲ್ಲ; ಆ ವ್ಯಕ್ತಿಗಳ ದೇಶಗಳು ಯಾವುವು, ಆ ದೇಶಗಳ ಆರ್ಥಿಕ ಸಾಮಾಜಿಕ ರಾಜಕೀಯ ಧೋರಣೆ ಏನು ಮುಂತಾದ ವಿಷಯವನ್ನೂ ಶ್ರುತಪಡಿಸುತ್ತದೆ. ಅಥೆನ್ಸ್, ಸ್ಪಾರ್ಟ, ಕಾರಿಂತ್ ಮೊದಲಾದುವನ್ನು ವ್ಯಕ್ತಿಲಾಂಛನದಿಂದ ಕೂಡಿ ಓದುಗರ ಮುಂದೆ ನಿಲ್ಲುವಂತೆ ಎಲ್ಲಿ ಮಾಡಲಾಗಿದೆ. ಪೆಲಪನೀಷಿಯನ್ ಯುದ್ಧದ ವರದಿಯಲ್ಲಿ ಪ್ರಾರಂಭವಾದ ಈ ಪುಸ್ತಕ ಕೊನೆ ಮುಟ್ಟುವ ಹೊತ್ತಿಗೆ ಅಥೆನ್ಸಿನ ಇಡೀ ರಾಜಕೀಯ ಆಖ್ಯಾನವಾಯಿತು. ಹೃದಯಂಗಮ ಕಾವ್ಯವಾಯಿತು, ಅನ್ಯಾದೃಶವಾಯಿತು. ಸಾವಿರಾರು ವರ್ಷ ಸಂದರೂ ಯೂರೋಪಿನ ಇತಿಹಾಸಕಾರರಿಗೆ ತ್ಯೂಸಿಡಿಡೀಸನೇ ಅನುಕರಣಯೋಗ್ಯನಾಗಿದ್ದಾನೆ.

	ಬಂಧದ ಬಿಗಿ ಸಂಕ್ಷಿಪ್ತತೆ ಗ್ರಾಂಥಿಕತೆ ಈತನ ಶೈಲಿಯ ಗುರುತು. ಯಾವ ಬಗೆಯ ಆಡಂಬರಕ್ಕೂ ಅದರಲ್ಲಿ ಆಸ್ಪದವಿಲ್ಲ. ಅಲ್ಲಲ್ಲಿ ಈತನನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ತ್ರಾಸವೆಂದು ವಿಮರ್ಶಕರ ಅಭಿಪ್ರಾಯ. ಅದು ತ್ರಾಸವೇ ಹೊರತು ಅಸಾಧ್ಯತೆಯಲ್ಲ.
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ